ಮೌಲ್ಯಶಿಕ್ಷಣದ ವಿಧಾನಗಳು ಮತ್ತು ಮೌಲ್ಯಮಾಪನ

 

ಮೌಲ್ಯಶಿಕ್ಷಣದ ವಿಧಾನಗಳು ಮತ್ತು ಮೌಲ್ಯಮಾಪನ

(Approaches and Assessment of Value Education)

  1. ನೇರವಿಧಾನ (Direct Approach):

         ನಿರ್ದಿಷ್ಠ ಪಠ್ಯಕ್ರಮ, ನೀತಿ ಕಥೆಗಳು, ಉಪನ್ಯಾಸಗಳು ಮತ್ತು ವಿಶೇಷ ಅವಧಿಗಳ ಮೂಲಕ ಮೌಲ್ಯಗಳನ್ನು ನೇರವಾಗಿ ಬೋಧಿಸುವುದು.

ಉದಾಹರಣೆ: ಸತ್ಯ, ಪ್ರಾಮಾಣಿಕತೆ, ಸಮಾನತೆ ಕುರಿತು ನೇರ ಪಾಠಗಳು.

ಬೋಧನಾ ತಂತ್ರಗಳು:

1. ಹಾಡುಗಳ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ (Sharing and reflections on Songs): ಮೌಲ್ಯಶಿಕ್ಷಣದ ನೇರ ವಿಧಾನದಲ್ಲಿ ಹಾಡುಗಳ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ ಅತ್ಯಂತ ಪರಿಣಾಮಕಾರಿಯಾದ ಬೋಧನಾ ತಂತ್ರವಾಗಿದೆ. ಸಂಗೀತವು ನೇರವಾಗಿ ಭಾವನೆಗಳನ್ನು ತಲುಪುವುದರಿಂದ, ಇದು ಮೌಲ್ಯಗಳನ್ನು ಆಳವಾಗಿ ಗ್ರಹಿಸಲು ನೆರವಾಗುತ್ತದೆ.

ಕಾರ್ಯವಿಧಾನ/ಪ್ರಕ್ರಿಯೆ:

                      i.        ದೇಶಭಕ್ತಿಗೀತೆಗಳು, ವಚನಗಳು, ದಾಸರ ಪದಗಳು, ತತ್ವಪದಗಳು ಅಥವಾ ಭಾವಗೀತೆಗಳಂತಹ ನೈತಿಕ ಮತ್ತ ಸಾಮಾಜಿಕ ಸಂದೇಶವಿರುವ ಹಾಡುಗಳನ್ನು ಆರಿಸುವುದು.

                     ii.        ವಿದ್ಯಾರ್ಥಿಗಳಿಗೆ ಹಾಡನ್ನು ಸ್ಪಷ್ಟವಾಗಿ ಕೇಳಿಸುವುದು ಅಥವಾ ಒಟ್ಟಾಗಿ ಹಾಡುವುದಕ್ಕೆ ಪ್ರೇರೇಪಿಸುವುದು.

                    iii.        ಹಾಡಿನಲ್ಲಿರುವ ಪ್ರಮುಖ ಸಾಲುಗಳು, ರೂಪಕಗಳು ಮತ್ತು ಅವುಗಳ ಹಿಂದಿರುವ ನೈತಿಕ ಅರ್ಥವನ್ನು ಬಿಡಿಸಿ ನೋಡುವುದು.

                    iv.        “ಈ ಹಾಡು ನನಗೆ ಏನು ಕಲಿಸಿತು?”. “ಇದರಲ್ಲಿ ಸಂದೇಶ ನನ್ನ ದೈನಂದಿನ ಜೀವನಕ್ಕೆ ಹೇಗೆ ಅನ್ವಯಿಸುತ್ತದೆ?” ಎಂದು ವಿದ್ಯಾರ್ಥಿಗಳು ಆಲೋಚಿಸುವುದು.

                     v.        ವಿದ್ಯಾರ್ಥಿಗಳು ತಮ್ಮ ಆಲೋಚನೆ, ಅನುಭವ ಮತ್ತು ಭಾವನೆಗಳನ್ನು ತರಗತಿಯಲ್ಲಿ ಮುಕ್ತವಾಗಿ ಹಂಚಿಕೊಳ್ಳುವುದು.

ಪ್ರಮುಖ ಪ್ರಯೋಜನಗಳು ಮತ್ತು ಮಹತ್ವ

1.     ಕೇವಲ ಉಪನ್ಯಾಸಕ್ಕಿಂತ ಹಾಡು ವಿದ್ಯಾರ್ಥಿಗಳ ಮನಸ್ಸನ್ನು ಬೇಗನೆ ಮುಟ್ಟಿ ಸಹಾನುಭೂತಿ, ಪ್ರೀತಿ ಮತ್ತು ಕೃತಜ್ಞತೆಯ ಭಾವವನ್ನು ಜಾಗೃತಗೊಳಿಸುತ್ತದೆ.

2.     ಹಾಡಿನ ಸಂದೇಶವನ್ನು ತಮ್ಮ ನಡವಳಿಕೆಯೊಂದಿಗೆ ಹೋಲಿಸಿಕೊಂಡು ತಪ್ಪು-ಒಪ್ಪುಗಳನ್ನು ತಾವೇ ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ದಾರಿಯಾಗುತ್ತದೆ.

3.     ಹಾಡಿನ ಮೂಲಕ ವಿದ್ದಾರ್ಥಿಗಳು ತಮ್ಮ ಅಭಿಪ್ರಾಯ, ಅನುಮಾನ ಹಾಗೂ ನೈತಿಕ ಮೌಲ್ಯಗಳನ್ನು ಹಿಂಜರಿಕೆ ಇಲ್ಲದೆ ಹಂಚಿಕೊಳ್ಳಲು ಕಲಿಯುತ್ತಾರೆ.

4.     ವಚನಗಳು, ಜನಪದ ಗೀತೆಗಳ ಮೂಲಕ ಸಮಾನತೆ, ಕಾಯದ ನಿಷ್ಠೆ ಮತ್ತು ಮಾನವೀಯತೆಯಂತಹ ಶಾಶ್ವತ ಮೌಲ್ಯಗಳು ಸುಲಭವಾಗಿ ಮನದಟ್ಟಾಗುತ್ತವೆ.

2. ಧರ್ಮಗ್ರಂಥಗಳ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ (Sharing and Reflection on Scripture):

        ಮೌಲ್ಯಶಿಕ್ಷಣದ ನೇರ ವಿಧಾನದಲ್ಲಿ‌ ಧರ್ಮಗ್ರಂಥಗಳು ಮತ್ತು ಧಾರ್ಮಿಕ-ನೈತಿಕ ಸಾಹಿತ್ಯದ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ ಸಾರ್ವತ್ರಿಕ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯುತ ತಂತ್ರವಾಗಿದೆ. ಇಲ್ಲಿ ಧರ್ಮಕ್ಕಿಂತ ಹೆಚ್ಚಾಗಿ ಅವುಗಳಲ್ಲಿರುವ ನೈತಿಕ ಮತ್ತು ಜೀವನ ಮೌಲ್ಯಗಳಿಗೆ ಒತ್ತು ನೀಡಲಾಗಿದೆ.

ಕಾರ್ಯವಿಧಾನ/ಪ್ರಕ್ರಿಯೆ:

          i.        ಭಗವದ್ಗೀತೆ, ಕುರಾನ್‌, ಬೈಬಲ್‌, ಧರ್ಮಪದ, ಜೈನ ಆಗಮಗಳು, ವಚನ ಸಾಹಿತ್ಯ ಅಥವಾ ಗುರು ಗ್ರಂಥ ಸಾಹಿಬ್ ನಿಂದ ಸತ್ಯ, ಕರುಣೆ, ಅಹಿಂಸೆ, ಕರ್ತವ್ಯನಿಷ್ಠೆ ಸಾರುವ ಆಯ್ದ ಸೂಕ್ತಿ, ಶ್ಲೋಕ ಅಥವಾ ನುಡಿಗಳನ್ನು ಆರಿಸುವುದು.

         ii.        ಆ ಸಾಲುಗಳ ಸರಳ ಅರ್ಥ ಮತ್ತು ಅವುಗಳ ಹಿಂದಿರುವ ಸಂದೇಶವನ್ನು ಯಾವುದೇ ಮತೀಯ ಬೇಧವಿಲ್ಲದೆ ಸಾರ್ವತ್ರಿಕ ದೃಷ್ಠಿಕೋನದಲ್ಲಿ ವಿವರಿಸುವುದು.

        iii.         ವಿದ್ಯಾರ್ಥಿಗಳು ಆ ಬೋಧನೆಯನ್ನು ಗ್ರಹಿಸಿ, “ಈ ಸಂದೇಶ ನನ್ನ ಜೀವನದಲ್ಲಿ ಎದುರಾಗುವ ಸವಾಲುಗಳು ಅಥವಾ ನಿರ್ಧಾರಗಳಿಗೆ ಹೇಗೆ ದಾರಿದೀಪವಾಗಬಲ್ಲದು? ಎಂದುಆಲೋಚಿಸುವುದು.

        iv.         ವಿದ್ಯಾರ್ಥಿಗಳು ತಮ್ಮ ತಿಳುವಳಿಕೆ, ವೈಯಕ್ತಿಕ ಅನುಭವ ಮತ್ತು ನೈತಿಕ ದೃಷ್ಠಿಕೋನಗಳನ್ನು ತರಗತಿಯಲ್ಲಿ ಮುಕ್ತವಾಗಿ ಚರ್ಚಿಸುವುದು.

ಪ್ರಮುಖ ಪ್ರಯೋಜನಗಳು ಮತ್ತು ಮಹತ್ವ:

1.     ಸತ್ಯ, ಪ್ರಾಮಾಣಿಕತೆ, ತ್ಯಾಗ ಮತ್ತು ಪರಹಿತ ಚಿಂತನೆಯಂತಹ ಸಾರ್ವಕಾಲಿಕ ಮೌಲ್ಯಗಳು ಇತಿಹಾಸ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ದೃಢವಾಗಿ ಮನದಟ್ಟಾಗುತ್ತದೆ.

2.     ದೈನಂದಿನ ಜೀವನದಲ್ಲಿ ಒಳಿತು ಮತ್ತು ಕೆಡಕಿನ ನಡುವೆ ಆಯ್ಕೆ ಮಾಡುವಾಗ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ವಿವೇಚನೆ ಬೆಳೆಯುತ್ತದೆ.

3.     ವಿವಿಧ ಧರ್ಮಗ್ರಂಥಗಳ ಮೂಲ ಸಂದೇಶ ಒಂದೇ (“ಮಾನವೀಯತೆ”) ಎಂಬುದನ್ನು ಅರಿತು, ಪರಸ್ಪರ ಗೌರವ ಮತ್ತು ಸಾಮರಸ್ಯವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ.

4.     ಮಾನಸಿಕ ಪ್ರಶಾಂತತೆ, ಸ್ವಯಂ-ಶಿಸ್ತು ಮತ್ತು ಆತ್ಮನಿಯಂತ್ರಣದ ಗುಣಗಳು ರೂಪುಗೊಳ್ಳುತ್ತವೆ.

3. ಆಯ್ದ ಗದ್ಯಭಾಗಗಳ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ (Passages):

           ಮೌಲ್ಯಶಿಕ್ಷಣದ ನೇರ ವಿಧಾನದಲ್ಲಿ ಆಯ್ದ ಗದ್ಯಭಾಗಗಳ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ ಒಂದು ಪ್ರಮುಖ ತಂತ್ರವಾಗಿದೆ. ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆ, ಆತ್ಮಕಥನ, ನೈತಿಕ ಪ್ರಬಂಧಗಳು ಅಥವಾ ಕಥೆಗಳ ಆಯ್ದ ಭಾಗಗಳನ್ನು ಓದಿ ಅರ್ಥೈಸಿಕೊಳ್ಳಲು ಇದು ನೆರವಾಗುತ್ತದೆ.

ಕಾರ್ಯವಿಧಾನ/ಪ್ರಕ್ರಿಯೆ:

1.     ಮಹಾತ್ಮ ಗಾಂಧೀಜಿ, ಡಾ. ಬಿ.ಆರ್.‌ ಅಂಬೇಡ್ಕರ್‌, ಸ್ವಾಮಿವಿವೇಕಾನಂದ, ಎ.ಪಿ.ಜೆ.ಅಬ್ದುಲ್‌ ಕಲಾಂ ಮುಂತಾದವರ ಬರಹಗಳು ಅಥವಾ ನೈತಿಕ ಸಂದೇಶವುಳ್ಳ ಕಿರುಗಥೆಗಳಿಂದ 1-2 ಪ್ಯಾರಾಗಳ ಸಣ್ಣ ಭಾಗವನ್ನು ಆರಿಸುವುದು.

2.     ವಿದ್ಯಾರ್ಥಿಗಳು ಆ ಗದ್ಯಭಾಗವನ್ನು ಗಮನವಿಟ್ಟು ಓದಿ, ಅದರಲ್ಲಿರುವ ಪ್ರಮುಖ ನೈತಿಕ ಅಂಶವನ್ನು ಗುರುತಿಸುವುದು.

3.     “ಈ ಘಟನೆ ಅಥವಾ ಮಾತು ನನಗೆ ಏನು ಕಲಿಸುತ್ತದೆ”? “ನಾನು ಇಂತಹ ಪರಿಸ್ಥತಿಯಲ್ಲಿದ್ದರೆ ಏನು ಮಾಡುತ್ತಿದ್ದೆ? ಎಂದು ವಿದ್ಯಾರ್ಥಿಗಳು ಆಳವಾಗಿ ಆಲೋಚಿಸುವುದು.

4.     ವಿದ್ಯಾರ್ಥಿಗಳು ಆ ಗದ್ಯಭಾಗದಿಂದ ತಮಗೆ ಸಿಕ್ಕ ಸ್ಪೂರ್ತಿ, ನೈತಿಕ ಪಾಠ ಮತ್ತು ಅದನ್ನು ತಮ್ಮ ದೈನಂದಿನ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ತರಗತಿಯಲ್ಲಿ ಹಂಚಿಕೊಳ್ಳುವುದು.

 ಪ್ರಮುಖ ಪ್ರಯೋಜನಗಳು ಮತ್ತು ಮಹತ್ವ:

1.     ಒಂದು ಸನ್ನಿವೇಶದ ಒಳಿತು-ಕೆಡಕುಗಳು, ಕಾರಣ-ಪರಿಣಾಮಗಳನ್ನು ವಿಶ್ಲೇಷಿಸುವ ಬುದ್ಧಿಶಕ್ತಿ ಬೆಳೆಯುತ್ತದೆ.

2.     ಇತರರ ನೋವು, ಹೋರಾಟ ಮತ್ತು ನೈತಿಕ ನಿರ್ಧಾರಗಳನ್ನು ಅವರ ಸ್ಥಾನದಲ್ಲಿದ್ದು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

3.     ಗದ್ಯಭಾಗಗಳಲ್ಲಿ ನೈಜ ಘಟನೆಗಳ ವಿವರಣೆ ಇರುವುದರಿಂದ, ಮೌಲ್ಯಗಳನ್ನು ಕೇವಲ ಕಲ್ಪನೆಯಾಗಿ ನೋಡದೆ ನಿಜ ಜೀವನದಲ್ಲಿ ಹೇಗೆ ಆಚರಿಸಬಹುದು ಎಂಬ ಸ್ಪಷ್ಟತೆ ಸಿಗುತ್ತದೆ.

4.     ತಮ್ಮ ನೈತಿಕ ನಿಲುವುಗಳು ಹಾಗೂ ಯೋಚನೆಗಳನ್ನು ತಾರ್ಕಿಕವಾಗಿ ಮತ್ತು ಸ್ಪಷ್ಟವಾಗಿ ಇತರರಿಗೆ ತಿಳಿಸುವ ಸಾಮರ್ಥ್ಯ ಹೆಚ್ಚುತ್ತದೆ.

4. ದೃಷ್ಟಾಂತ ಕಥೆಗಳ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ (Parables):

           ಮೌಲ್ಯಶಿಕ್ಷಣದ ನೇರ ವಿಧಾನದಲ್ಲಿ ದೃಷ್ಟಾಂತ ಕಥೆಗಳ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ ಒಂದು ಅತ್ಯಂತ ಆಕರ್ಷಕ ತಂತ್ರವಾಗಿದೆ. ದೃಷ್ಟಾಂತ ಕಥೆಗಳು ಎಂದರೆ ದೈನಂದಿನ ಸರಳ ಸನ್ನಿವೇಶಗಳ ಮೂಲಕ ಆಳವಾದ ನೈತಿಕ ಹಾಗೂ ಆಧ್ಯಾತ್ಮಕ ಸತ್ಯಗಳನ್ನು ಬೋಧಿಸುವ ಕಿರುಕಥೆಗಳು (ಉದಾ: ಬೈಬಲ್ನ ಕರುಣಾಮಯಿ ಸಮಾರ್ಯದವನ ಕಥೆ, ಬುದ್ಧನ ಸಾಸಿವೆ ಕಾಳಿನ ಕಥೆ, ರಾಮಕೃಷ್ಣ ಪರಮಹಂಸರ ನೀತಿಕಥೆಗಳು).

 

ಕಾರ್ಯವಿಧಾನ/ಪ್ರಕ್ರಿಯೆ

1.       ಸರಳ ಪಾತ್ರಗಳು ಮತ್ತು ಸನ್ನಿವೇಶಗಳಿರುವ, ಸ್ಪಷ್ಟ ನೈತಿಕ ತಿರುಳುಳ್ಳ ಕಿರು ದೃಷ್ಟಾಂತ ಕಥೆಯನ್ನು ಶಿಕ್ಷಕರು ಹೇಳುವುದು ಅಥವಾ ವಿದ್ಯಾರ್ಥಿಗಳಿಗೆ ಓದಲು ನೀಡುವುದು.

2.       ಕಥೆಯ ಮೇಲ್ಮೈ ಅರ್ಥವನ್ನು ಮೀರಿ, ಅದರಲ್ಲಿ ಅಡಗಿರುವ ಒಳಾರ್ಥ, ನೈತಿಕ ಮೌಲ್ಯ ಮತ್ತು ಸಾಂಕೇತಿಕತೆಯನ್ನು ವಿದ್ಯಾರ್ಥಿಗಳು ಗುರುತಿಸುವುದು.

3.       “ಈ ಕಥೆಯ ಯಾವ ಪಾತ್ರ ನನ್ನಂತಿದೆ?”, ಕಥೆಯ ನಾಯಕನ ನಿರ್ಧಾರ ನನ್ನ ಜೀವನದ ಸಂದರ್ಭಗಳಿಗೆ ಹೇಗೆ ಮಾರ್ಗದರ್ಶನ ನೀಡಬಲ್ಲದು?” ಎಂದು ಆಲೋಚಿಸುವುದು.

4.       ಕಥೆ ಕಲಿಸಿದ ಪಾಠ, ಸರಿ-ತಪ್ಪುಗಳ ವಿವೇಚನೆ ಮತ್ತು ನಡವಳಿಕೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳ ಬಗ್ಗೆ ವಿದ್ಯಾರ್ಥಿಗಳು ಮುಕ್ತವಾಗಿ ಚರ್ಚಿಸುವುದು.

ಪ್ರಮುಖ ಪ್ರಯೋಜನಗಳು ಮತ್ತು ಮಹತ್ವ:

1.       ಕ್ಷಮೆ, ನಿಸ್ವಾರ್ಥತೆ,ಕರುಣೆ, ನಮ್ರತೆಯಂತಹ ಅಮೂರ್ತ ಮತ್ತು ಕಠಿಣ ಮೌಲ್ಯಗಳು ಕಥೆಯ ರೂಪದಲ್ಲಿ ಮನಸ್ಸಿಗೆ ನೇರವಾಗಿ ತಲುಪುತ್ತವೆ.

2.       ಉಪದೇಶಗಳಿಗಿಂತ ಕಥೆಯ ಘಟನೆಗಳು ಮತ್ತು ಪಾತ್ರಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೀರ್ಘಕಾಲ ಉಳಿದು ನೈತಿಕ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತವೆ.

3.       ಯಾರೂ ನೇರವಾಗಿ ತಪ್ಪು ಹೇಳದೆ, ಕಥೆಯ ಪಾತ್ರಗಳ ಮೂಲಕ ತಮ್ಮ ಸ್ವಂತ ತಪ್ಪು-ಕೊರತೆಗಳನ್ನ ವಿದ್ಯಾರ್ಥಿಗಳು ತಾವೇ ತಿದ್ದಿಕೊಳ್ಳಲು ಪ್ರೇರೇಪಿಸುತ್ತದೆ.

4.       ಪ್ರತಿಯೊಬ್ಬ ವ್ಯಕ್ತಿಯ ಕಷ್ಟ-ಸುಖಗಳನ್ನು ಅರ್ಥಮಾಡಿಕೊಂಡು ಇತರರ ಬಗ್ಗೆ ಸಹಾನುಭೂತಿ ತೋರುವ ಸಂವೇದನಾಶೀಲತೆ ಬೆಳೆಯುತ್ತದೆ.

5. ಕಥೆಗಳ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ (Stories):

        ಮೌಲ್ಯಶಿಕ್ಷಣದಲ್ಲಿ ನೇರ ವಿಧಾನದಲ್ಲಿ ಕಥೆಗಳ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞೆಯನ್ನು ಮೂಡಿಸಲು ಶತಮಾನಗಳಿಂದ ಬಳಕೆಯಲ್ಲಿರುವ ಅತ್ಯಂತ ಜನಪಿಯ ಮತ್ತು ಸಹಜವಾದ ತಂತ್ರವಾಗಿದೆ. ಪಂಚತಂತ್ರ, ಹಿತೋಪದೇಶ, ಜಾತಕ ಕಥೆಗಳು, ಜಾನಪದ ಹಾಗೂ ನೈಜ ಘಟನೆಗಳ ಕಥೆಗಳು ಇದಕ್ಕೆ ಪ್ರಮುಖ ಮೂಲಗಳು.

ಕಾರ್ಯವಿಧಾನ/ಪ್ರಕ್ರಿಯೆ

1.     ತರಗತಿಯ ವಯೋಮಾನಕ್ಕೆ ತಕ್ಕಂತೆ ಪ್ರಾಮಾಣಿಕತೆ, ತ್ಯಾಗ, ಧೈರ್ಯ, ಸ್ನೇಹ ಅಥವಾ ನ್ಯಾಯವನ್ನು ಬಿಂಬಿಸುವ ಕಥೆಯನ್ನು ಭಾವಪೂರ್ಣವಾಗಿ ನಿರೂಪಿಸುವುದು.

2.     ಕಥೆಯಲ್ಲಿನ ಪಾತ್ರಗಳ ನಡವಳಿಕೆ, ಅವರು ತೆಗೆದುಕೊಂಡ ನಿರ್ಧಾರಗಳು ಮತ್ತು ಅದರಿಂದ ಉಂಟಾದ ಪರಿಣಾಮಗಳನ್ನು ಗುರುತಿಸುವುದು.

3.     ಆತ್ಮಾವಲೋಕನ: “ಕಥೆಯ ಪಾತ್ರ ಆ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?, “ನಾನು ಆ ಜಾಗದಲ್ಲಿದ್ದರೆ ಏನು ಮಾಡುತ್ತಿದೆ?”. “ಈ ಕಥೆ ನನ್ನ ದೈನಂದಿನ ಜೀವನದ ಯಾವ ನಡವಳಿಕೆಯನ್ನು ನೆನಪಿಸುತ್ತದೆ?”. ಎಂದು ವಿದ್ಯಾರ್ಥಿಗಳು ಆಳವಾಗಿ ಯೋಚಿಸುವುದು.

4.     ವಿದ್ಯಾರ್ಥಿಗಳು ಕಥೆಯ ತಿರುಳು, ತಮ್ಮ ವೈಯಕ್ತಿಕ ಅನುಭವಗಳು ಹಾಗೂ ಆ ಕಥೆಯಿಂದ ಕಲಿತ ನೈತಿಕ ಪಾಠವನ್ನು ಗೆಳೆಯರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವುದು.

ಪ್ರಮುಖ ಪ್ರಯೋಜನಗಳು ಮತ್ತು ಮಹತ್ವ:

1.     ಕಥೆಗಳಲ್ಲಿ ಕುತೂಹಲ ಮತ್ತು ಭಾವನಾತ್ಮಕ ಸೆಳೆತ ಇರುವುದರಿಂದ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುತ್ತಾರೆ; ಬೋಧನೆ ನೀರಸವೆನಿಸುವುದಿಲ್ಲ.

2.     ಒಳ್ಳೆಯ ಮತ್ತು ಕೆಟ್ಟ ಆಯ್ಕೆಗಳ ಫಲಿತಾಂಶವನ್ನು ಕಥೆಯ ಮೂಲಕ ನೋಡುವುದರಿಂದ, ವಾಸ್ತವ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿವೇಚನೆ ಬೆಳೆಯುತ್ತದೆ.

3.     ಕಲ್ಪನಾಶಕ್ತಿ ಮತ್ತು ಸಹಾನುಭೂತಿ: ಇತರರ ನೋವು-ನಲಿವುಗಳನ್ನು ತಮ್ಮದೇ ಎಂದು ಕಲ್ಪಿಸಿಕೊಳ್ಳುವ ಮತ್ತು ಸಹಾನುಭೂತಿ ತೋರುವ ಗುಣ ವೃದ್ಧಿಯಾಗುತ್ತದೆ.

4.     ಶುಷ್ಕ ಉಪದೇಶಗಳಿಗಿಂತ ಕಥೆಯ ಘಟನೆಗಳು ಮತ್ತು ಪಾತ್ರಗಳ ಮುಖಾಂತರ ಕಲಿತ ಮೌಲ್ಯಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತವೆ.

6. ಪ್ರಕರಣ ಅಧ್ಯಯನದ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ (Case study):

      ಮೌಲ್ಯಶಿಕ್ಷಣದಲ್ಲಿ ನೇರ ವಿಧಾನದಲ್ಲಿ ಪ್ರಕರಣದ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ ವಿದ್ಯಾರ್ಥಿಗಳಲ್ಲಿ ನೈತಿಕ ವಿವೇಚನೆ ಮತ್ತು ಸಮಸ್ಯೆ ಪರಿಹಾರ ಕೌಶಲವನ್ನು ಬೆಳೆಸುವ ಅತ್ಯಂತ ಪ್ರಾಯೋಗಿಕ ತಂತ್ರವಾಗಿದೆ. ಇದರಲ್ಲಿ ನೈಜ ಜೀವನದ ಘಟನೆ ಅಥವಾ ನೈತಿಕ ಸಂದಿಗ್ದತೆ ಇರುವ ಸನ್ನಿವೇಶವನ್ನ ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ.

ಕಾರ್ಯವಿಧಾನ/ಪ್ರಕ್ರಿಯೆ

1.     ಪ್ರಕರಣದ ಮಂಡನೆ: ನೈತಿಕ ಸಂದಿಗ್ದತೆ ಇರುವ ನೈಜ ಅಥವಾ ವಾಸ್ತವಕ್ಕೆ ಹತ್ತಿರವಾದ ಸನ್ನಿವೇಶವನ್ನು ವಿದ್ಯಾರ್ಥಿಗಳ ಮುಂದೆ ಇಡುವುದು (ಉದಾ: ಪರೀಕ್ಷೆಯಲ್ಲಿ ಗೆಳೆಯ ನಕಲು ಮಾಡುತ್ತಿರುವುದನ್ನು ಕಂಡಾಗ ಸ್ನೇಹ ಉಳಿಸಿಕೊಳ್ಳಬೇಕೆ ಅಥವಾ ಪ್ರಾಮಾಣಿಕತೆ ತೋರಬೇಕೆ?).

2.     ಸಮಸ್ಯೆಯ ಗುರುತಿಸುವಿಕೆ: ಸನ್ನಿವೇಶದಲ್ಲಿರುವ ಮುಖ್ಯ ನೈತಿಕ ಸಂಘರ್ಷ, ಒಳಗೊಂಡಿರುವ ವ್ಯಕ್ತಿಗಳು ಮತ್ತು ಅವರ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವುದು.

3.     ಆತ್ಮಾವಲೋಕನ ಮತ್ತು ವಿಶ್ಲೇಷಣೆ: “ಇಲ್ಲಿ ಸರಿ ಯಾವುದು, ತಪ್ಪು ಯಾವುದು?, “ಯಾವ ನಿರ್ಧಾರ ತೆಗೆದುಕೊಂಡರೆ ಏನು ಪರಿಣಾಮವಾಗಬಹುದು?”. ಎಂದು ವಿದ್ಯಾರ್ಥಿಗಳು ಆಳವಾಗಿ ತರ್ಕಿಸುವುದು.

4.     ಅನಿಸಿಕೆ ಮತ್ತು ಪರಿಹಾರ ಮಂಡನೆ: ಪ್ರತಿಯೊಬ್ಬ ವಿದ್ಯಾರ್ಥಿ ಅಥವಾ ಗುಂಪು ತಮ್ಮ ದೃಷ್ಟಿಕೋನ, ತೆಗೆದುಕೊಂಡ ನಿರ್ಧಾರ ಮತ್ತು ಅದಕ್ಕೆ ನೀಡುವ ನೈತಿಕ ಸಮರ್ಥನೆಯನ್ನು ತರಗತಿಯಲ್ಲಿ ಹಂಚಿಕೊಳ್ಳುವುದು.

ಪ್ರಮುಖ ಪ್ರಯೋಜನಗಳು ಮತ್ತು ಮಹತ್ವ:

1.     ಸನ್ನಿವೇಶಗಳು ಕಪ್ಪು-ಬಿಳುಪಿನಷ್ಟೇ ಸರಳವಾಗಿರದೆ ಜಟಿಲವಾಗಿದ್ದಾಗ, ಸೂಕ್ತ ಮೌಲ್ಯವನ್ನು ಅರಿಸಿಕೊಳ್ಳುವ ವಿವೇಚನಾ ಶಕ್ತಿ ಬೆಳೆಯುತ್ತದೆ.

2.     ನೈಜ ಜಗತ್ತನ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ನೈತಿಕತೆಗೆ ಬದ್ದವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಪಕ್ವತೆ ಬರುತ್ತದೆ.

3.     ಒಂದೇ ಸಮಸ್ಯೆಗೆ ಇತರರು ಯೋಚಿಸುವ ಭಿನ್ನ ದಾರಿಗಳನ್ನು ಕೇಳಿ, ಸಹಿಷ್ಣುತೆ ಮತ್ತು ಮುಕ್ತ ಮನೋಭಾವ ಬೆಳೆಯುತ್ತದೆ.

4.     ಮೌಲ್ಯಗಳು ಕೇವಲ ಪುಸ್ತಕದ ಅದರ್ಶಗಳಾಗಿ ಉಳಿಯದೆ, ದೈನಂದಿನ ನೈಜ ಬದುಕಿನಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬ ಸ್ಪಷ್ಟ ತಿಳುವಳಿಕೆ ಮೂಡುತ್ತದೆ.

7. ಪಾತ್ರಾಭಿನಯದ  ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ (Role play):

         ಮೌಲ್ಯಶಿಕ್ಷಣದಲ್ಲಿ ನೇರ ವಿಧಾನದಲ್ಲಿ ಪಾತ್ರಾಭಿನಯದ  ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ ಅತ್ಯಂತ ಸಕ್ರಿಯ ಮತ್ತು ಪ್ರಾಯೋಗಿಕ ತಂತ್ರವಾಗಿದೆ. ವಿದ್ಯಾರ್ಥಿಗಳು ನಿರ್ದಿಷ್ಟ ನೈತಿಕ ಸನ್ನಿವೇಶದ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಆ ಪಾತ್ರದ ಭಾವನೆಗಳು ಮತ್ತು ನಿರ್ಧಾರಗಳನ್ನು ನೇರವಾಗಿ ಅನುಭವಿಸಲು ಇದು ಅವಕಾಶ ನೀಡುತ್ತದೆ.

ಕಾರ್ಯವಿಧಾನ/ಪ್ರಕ್ರಿಯೆ

1.     ನೈತಿಕ ಸಂಘರ್ಷವಿರುವ ಸನ್ನಿವೇಶವನ್ನು ಆರಿಸುವುದು (ಉದಾ: ಶಾಲೆಯಲ್ಲಿ ದುರ್ಬಲ ವಿದ್ಯಾರ್ಥಿಯನ್ನು ರೇಗಿಸುವುದು, ಹಿರಿಯರೊಂದಿಗೆ ವಾಗ್ವಾದ, ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಪ್ರಸಂಗ).

2.     ವಿದ್ಯಾರ್ಥಿಗಳು ವಿವಿಧ ಪಾತ್ರಗಳನ್ನು (ಉದಾ: ಸಂತ್ರಸ್ತ, ಪ್ರಚೋದಕ, ಮೂಕಪ್ರೇಕ್ಷಕ, ಸಹಾಯ ಮಾಡುವವನು) ವಹಿಸಿಕೊಂಡು ತಕ್ಷಣದ ಸಂಭಾಷಣೆಗಳ ಮೂಲಕ ಅಭಿನಯಿಸುವುದು.

3.     ಅಭಿನಯ ಮುಗಿದ ನಂತರ ಪಾತ್ರಗಳಿಂದ ಹೊರಬಂದು,”ಆ ಪಾತ್ರದಲ್ಲಿದ್ದಾಗ ನನಗೆ ಯಾವ ಭಾವನೆ ಉಂಟಾಯಿತು?” “ನನ್ನ ಪ್ರತಿಕ್ರಿಯೆ ಸರಿಯಿತ್ತೇ?”. ಎಂದು ಚಿಂತಿಸುವುದು.

4.     ಅಭಿನಯಿಸಿದವರು ತಮ್ಮ ಮಾನಸಿಕ ತುಮುಲಗಳನ್ನು ಮತ್ತು ವೀಕ್ಷಿಸಿದ ವಿದ್ಯಾರ್ಥಿಗಳು ಸನ್ನಿವೇಶದ ಒಳಿತು-ಕೆಡುಕುಗಳನ್ನು ತರಗತಿಯಲ್ಲಿ ಹಂಚಿಕೊಳ್ಳುವುದು.

ಪ್ರಮುಖ ಪ್ರಯೋಜನಗಳು ಮತ್ತು ಮಹತ್ವ:

1.     ಇನ್ನೊಬ್ಬರ ಸ್ಥಾನದಲ್ಲಿ ನಿಂತು ಅವರ ನೋವು, ಅವಮಾನ ಅಥವಾ ಅಸಹಾಯಕತೆಯನ್ನು ಸ್ವತಃ ಅನುಭವಿಸುವುದರಿಂದ ಸಹಾನುಭೂತಿ ಸಹಜವಾಗಿ ಬೆಳೆಯುತ್ತದೆ.

2.     ಕೋಪ, ಭಯ, ಅನ್ಯಾಯದಂತಹ ಸಂದರ್ಭಗಳಲ್ಲಿ ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕು ಮತ್ತು ಸಕಾರಾತ್ಮಕವಾಗಿ ಹೇಗೆ ವರ್ತಿಸಬೇಕು ಎಂಬ ಅರಿವು ಮೂಡುತ್ತದೆ.

3.     ನಿಜ ಜೀವನದಲ್ಲಿ ಅನ್ಯಾಯ ನಡೆದಾಗ ಧ್ವನಿ ಎತ್ತುವುದು,ಇನ್ನೊಬ್ಬರಿಗೆ ನೆರವಾಗುವುದು ಮತ್ತು ಸಂಘರ್ಷಗಳನ್ನು ಶಾಂತಿಯುತವಾಗಿ ಬಗೆಹರಿಸುವ ಧೈರ್ಯ ಬರುತ್ತದೆ.

4.     ಕೇವಲ ಕೇಳುವುದಕ್ಕಿಂತ ಸ್ವತಃ ಆಚರಿಸಿ ನೋಡುವುದರಿಂದ ಮೌಲ್ಯಗಳು ಶಾಶ್ವತವಾಗಿ ಮನಸ್ಸಿನಲ್ಲಿ ಬೇರೂರುತ್ತವೆ.

8. ಚಿತ್ರ ಭಾಷೆಯ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ (Photo language):

       ಮೌಲ್ಯಶಿಕ್ಷಣದಲ್ಲಿ ನೇರ ವಿಧಾನದಲ್ಲಿ ಚಿತ್ರಭಾಷೆಯ  ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ ಅತ್ಯಂತ ಪ್ರಭಾವಶಾಲಿ ದೃಶ್ಯ ಮಾಧ್ಯಮ ತಂತ್ರವಾಗಿದೆ. “ಒಂದು ಚಿತ್ರ ಸಾವಿರ ಮಾತುಗಳಿಗೆ ಸಮಾನ” ಎಂಬಂತೆ, ಅರ್ಥಗರ್ಭಿತ ಛಾಯಾಚಿತ್ರಗಳು, ಕಾರ್ಟೂನ್‌ ಗಳು ಅಥವಾ ಪೇಂಟಿಂಗ್ ಗಳ ಮೂಲಕ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಗ್ರಹಿಸಲು ಇದು ವಿದ್ಯಾರ್ಥಿಗಳಿಗೆ ನೆರವಾಗುತ್ತದೆ.

ಕಾರ್ಯವಿಧಾನ/ಪ್ರಕ್ರಿಯೆ

1.     ಬಡತನ, ಪರಿಸರ ಮಾಲಿನ್ಯ, ಹಿರಿಯರ ಆರೈಕೆ, ಲಿಂಗ ಸಮಾನತೆ, ಮಾನವೀಯತೆ, ಅಥವಾ ಪ್ರಾಣಿ ದಯೆಯನ್ನು ಬಿಂಬಿಸುವ ಶಕ್ತಿಯುತ ಛಾಯಾಚಿತ್ರಗಳನ್ನು ಆರಿಸುವುದು.

2.     ವಿದ್ಯಾರ್ಥಿಗಳಿಗೆ ಯಾವುದೇ ವಿವರಣೆ ನೀಡದೆ ಚಿತ್ರವನ್ನು ಏಕಾಗ್ರತೆಯಿಂದ ಗಮನಿಸಲು ಸಮಯ ನೀಡುವುದು (ಚಿತ್ರದಲ್ಲಿರುವ ಪಾತ್ರಗಳ ಮುಖಭಾವ, ಪರಿಸರ, ಹಿನ್ನೆಲೆ ಇತ್ಯಾದಿ).

3.     “ಈ ಚಿತ್ರದಲ್ಲಿ ಏನು ನಡೆಯುತ್ತಿದೆ?”. “ಪಾತ್ರಗಳ ಮುಖಭಾವ ಏನು ಹೇಳುತ್ತಿದೆ?.” “ಈ ಚಿತ್ರ ನಮಗೆ ನೀಡುತ್ತಿರುವ ಮೌಲ್ಯಯುತ ಸಂದೇಶವೇನು?”. ಎಂದು ಪ್ರತಿಯೊಬ್ಬ ವಿದ್ಯಾರ್ಥಿ ವ್ಯಯಕ್ತಿಕವಾಗಿ ಆಲೋಚಿಸುವುದು.

4.     ವಿದ್ಯಾರ್ಥಿಗಳು ಅ ಚಿತ್ರವನ್ನು ತಾವು ಹೇಗೆ ಗ್ರಹಿಸಿದರು, ಅದರಿಂದ ತಮ್ಮ ಮನಸ್ಸಿನಲ್ಲಿ ಯಾವ ಭಾವನೆ ಮೂಡಿತು ಎಂಬುದನ್ನು ತರಗತಿಯಲ್ಲಿ ಮುಕ್ತವಾಗಿ ಹಂಚಿಕೊಳ್ಳುವುದು.

ಪ್ರಮುಖ ಪ್ರಯೋಜನಗಳು ಮತ್ತು ಮಹತ್ವ:

1.     ಓದು-ಬರಹದ ತೊಡಕಿಲ್ಲದೆ, ಕೇವಲ ದೃಶ್ಯಗಳ ಮೂಲಕವೇ ಸಂಕೀರ್ಣ ಮೌಲ್ಯಗಳು ಎಲ್ಲ ಹಂತದ ವಿದ್ಯಾರ್ಥಿಗಳ ಮನಸ್ಸಿಗೆ ನೇರವಾಗಿ ತಲುಪುತ್ತದೆ.

2.     ಒಂದೇ ಚಿತ್ರವನ್ನು ವಿಭಿನ್ನ ವಿದ್ಯಾರ್ಥಿಗಳು ಬೇರೆ ಬೇರೆ ಕೋನಗಳಲ್ಲಿ ನೋಡುವುದರಿಂದ, ಪರಸ್ಪರ ವಿಭಿನ್ನ ಆಲೋಚನೆಗಳನ್ನು ಗೌರವಿಸುವ ಗುಣ ಬೆಳೆಯುತ್ತದೆ.

3.     ಸಮಜದಲ್ಲಿನ ಅಸಮಾನತೆ, ನೋವು, ಪರಿಸರ ನಾಶದಂತಹ ಕಟು ವಾಸ್ತವಗಳ ಚಿತ್ರಗಳನ್ನು ನೋಡಿದಾಗ ವಿದ್ಯಾರ್ಥಿಗಳಲ್ಲಿ ಕಳಕಳಿ ಮತ್ತು ಜವಾಬ್ದಾರಿಯುತ ವರ್ತನೆ ಜಾಗೃತಗೊಳ್ಳುತ್ತದೆ.

4.     ದೃಶ್ಯಗಳಲ್ಲಿನ ಸಾಂಕೇತಿಕತೆ ಮತ್ತು ಗುಪ್ತ ಅರ್ಥಗಳನ್ನು ಬಿಡಿಸಿ ನೋಡುವ ವಿಮರ್ಶಾತ್ಮಕ ಚಿಂತನಾ ಶಕ್ತಿ ಹೆಚ್ಚುತ್ತದೆ.

ಮಂಥನ/ಮೆದುಳು ಕಸರತ್ತು (Brain Storming):

         ಮೌಲ್ಯಶಿಕ್ಷಣದಲ್ಲಿ ಮಂಥನ ಎಂಬುದು ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞೆ, ವಿಮರ್ಶಾತ್ಮಕ ಚಿಂತನೆ ಮತ್ತು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವ ಒಂದು ಪರಿಣಾಮಕಾರಿ ಬೋಧನಾ ತಂತ್ರವಾಗಿದೆ.

       ಮೌಲ್ಯಗಳನ್ನು ಬಲವಂತವಾಗಿ ಹೇರುವ ಬದಲು, ಮುಕ್ತ ಚರ್ಚೆಯ ಮೂಲಕ ವಿದ್ಯಾರ್ಥಿಗಳೇ ನೈತಿಕ ಪರಿಹಾರಗಳನ್ನು ಕಂಡುಕೊಳ್ಳಲು ಇದು ನೆರವಾಗುತ್ತದೆ.

ಪ್ರಮುಖ್ಯತೆ:

1.     ಮೌಲ್ಯಗಳನ್ನು ಕೇವಲ ಬೋಧಿಸದೆ, ವಿದ್ಯಾರ್ಥಿಗಳೇ ಸ್ವತಃ ಆಲೋಚಿಸಿ ಅರ್ಥಮಾಡಿಕೊಳ್ಳುವುದರಿಂದ ಅವು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ.

2.     ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ತರ್ಕಬದ್ದವಾಗಿ ವಿಶ್ಲೇಷಿಸುವ ಬೌಧ್ದಿಕ ಸಾಮರ್ಥ್ಯ ಹೆಚ್ಚುತ್ತದೆ.

3.     ಇತರರ ವಿಭಿನ್ನ ಅಭಿಪ್ರಾಯ, ಹಿನ್ನೆಲೆ ಹಾಗೂ ದೃಷ್ಠಿಕೋನಗಳನ್ನು ಗೌರವಿಸುವ ಸಹಬಾಳ್ವೆಯ ಗುಣ ಬೆಳೆಯುತ್ತದೆ.

4.     ನೈತಿಕ ಗೊಂದಲಗಳು ಎದುರಾದಾಗ ಧೈರ್ಯವಾಗಿ, ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗುತ್ತದೆ.

5.     ಯಾವುದೇ ಭಯವಿಲ್ಲದೆ ತಮ್ಮ ಭಾವನೆ ಮತ್ತು ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅತ್ಮವಿಶ್ವಾಸ ಮೂಡುತ್ತದೆ.

6.     ಸಮಾಜದ ನಿಯಮಗಳು, ಪರಿಸರ ಹಾಗೂ ಮಾನವ ಹಕ್ಕುಗಳ ಬಗ್ಗೆ ಸೂಕ್ಷ್ಮ ಸಂವೇದನೆ ಮತ್ತು ಹೊಣೆಗಾರಿಕೆ ಬೆಳೆಯುತ್ತದೆ.

ಉಪಯೋಗಗಳು:

1.     ಸಮಾಜದ ವಾಸ್ತವ ಸಮಸ್ಯೆಗಳು ಮತ್ತು ನೈತಿಕ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಳವಾದ ಅರಿವು ಮೂಡಿಸುತ್ತದೆ.

2.     ಇತರರ ಎದುರು ತಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ, ಧೈರ್ಯವಾಗಿ ಮಂಡಿಸುವ ಕಲೆ ಸಿದ್ಧಿಸುತ್ತದೆ.

3.     ಗುಂಪಿನಲ್ಲಿ ಚರ್ಚಿಸುವುದರಿಂದ ಸಹಪಾಠಿಗಳೊಂದಿಗೆ ಹೊಂದಾಣಿಕೆ, ಸಹಕಾರ ಹಾಗೂ ತಂಡವಾಗಿ ಕೆಲಸ ಮಾಡುವ ಮನೋಭಾವ ಬೆಳೆಯುತ್ತದೆ.

4.     ವಿದ್ಯಾರ್ಥಿಗಳು ತಾವೇ ಚರ್ಚಿಸಿ ಒಪ್ಪಿಕೊಂಡ ಮೌಲ್ಯಗಳನ್ನು ತಮ್ಮ ದೈನಂದಿನ ಜೀವನ ಮತ್ತು ನಡವಳಿಕೆಯಲ್ಲಿ ಸುಲಭವಾಗಿ ಅಳವಡಿಸಿಕೊಳ್ಳುತ್ತಾರೆ.

5.     ಜಾತಿ, ಮತ, ಲಿಂಗ ಅಥವಾ ಅಂತಸ್ತಿನ ಕುರಿತಾದ ಸಂಕುಚಿತ ಭಾವನೆಗಳನ್ನು ತೊಡೆದುಹಾಕಿ ವಿಶಾಲ ಮನೋಭಾವ ಬೆಳೆಸಲು ನೆರವಾಗುತ್ತದೆ.

6.     ಸಮಾಜ ಅಥವಾ ಶಾಲಾ ಹಂತದಲ್ಲಿ ಎದುರಾಗುವ ಸಂಘರ್ಷಗಳಿಗೆ ಶಾಂತಿಯುತ ಹಾಗೂ ಹೊಸ ದಾರಿಯ ಪರಿಹಾರಗಳನ್ನು ಕಂಡುಕೊಳ್ಳಬಹುದು.

ಮೌಲ್ಯಶಿಕ್ಷಣದಲ್ಲಿ ಮಂಥನವನ್ನು ನಡೆಸುವ ಹಂತಗಳು:

1.     ವಿಷಯ ಅಥವಾ ಸಂದಿಗ್ದತೆಯ ಆಯ್ಕೆ: ಒಂದು ಸ್ಪಷ್ಪವಾದ ನೈತಿಕ ಸನ್ನಿವೇಶ, ಪ್ರಶ್ನೆ ಅಥವಾ ಸಾಮಾಜಿಕ ಸಮಸ್ಯೆಯನ್ನು ವಿದ್ಯಾರ್ಥಿಗಳ ಮುಂದಿಡುವುದು (ಉದಾ: ಶಾಲೆಯಲ್ಲಿ ದುರ್ಬಲರನ್ನು ರೇಗಿಸುವುದು ತಡೆಯುವುದು ಹೇಗೆ?).

2.     ನಿಯಮಗಳ ನಿಗದಿ: ಯಾರ ಅಭಿಪ್ರಾಯವನ್ನೂ ತಕ್ಷಣವೇ ಟೀಕಿಸಬಾರದು ಮತ್ತು ಪ್ರತಿಯೊಬ್ಬರಿಗೂ ಮಾತನಾಡಲು ಸಮಾನ ಅವಕಾಶ ನೀಡಬೇಕು ಎಂದು ಸ್ಪಷ್ಟಪಡಿಸುವುದು.

3.     ಮುಕ್ತ ಆಲೋಚನೆಗಳ ಸಂಗ್ರಹ: ವಿದ್ಯಾರ್ಥಿಗಳಿಗೆ ತಮ್ಮ ಮನಸ್ಸಿಗೆ ಬಂದ ಎಲ್ಲಾ ವಿಚಾರಗಳು ಮತ್ತು ಪರಿಹಾರಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಮುಕ್ತವಾಗಿ ಹಂಚಿಕೊಳ್ಳಲು ಪ್ರೋತ್ಸಾಹಿಸುವುದು.

4.     ದಾಖಲೀಕರಣ: ವಿದ್ಯಾರ್ಥಿಗಳು ಹೇಳಿದ ಪ್ರತಿಯೊಂದು ಸಲಹೆ ಮತ್ತು ಆಲೋಚನೆಯನ್ನು ಕಪ್ಪುಹಲಗೆಯ ಮೇಲೆ ಅಥವಾ ಚಾರ್ಟನಲ್ಲಿ ಪಟ್ಟಿ ಮಾಡುವುದು.

5.     ವರ್ಗೀಕರಣ ಮತ್ತು ವಿಶ್ಲೇಷಣೆ: ಸಂಗ್ರಹವಾದ ಎಲ್ಲಾ ವಿಚಾರಗಳನ್ನು ಒಟ್ಟಾಗಿ ಚರ್ಚಿಸಿ, ಮಾನವೀಯ ಮೌಲ್ಯಗಳು (ಸತ್ಯ, ನ್ಯಾಯ, ಕರುಣೆ) ಮತ್ತು ಪ್ರಾಯೋಗಿಕತೆಯ ಆಧಾರದ ಮೇಲೆ ವರ್ಗೀಕರಿಸುವುದು.

6.     ಅಂತಿಮ ತೀರ್ಮಾನ ಮತ್ತು ಪ್ರತಿಫಲನ: ಸಮಸ್ಯೆಗೆ ಅತ್ಯಂತ ಸೂಕ್ತವಾದ ನೈತಿಕ ಪರಿಹಾರವನ್ನು ಆಯ್ದುಕೊಂಡು, ಅದನ್ನು ನಿತ್ಯಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳು ಆಲೋಚಿಸುವಂತೆ ಮಾಡುವುದು.

ಗುಣಗಳು:

1.     ಕೇವಲ ಕೇಳುಗರಾಗದೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಚಟುವಟಿಕೆಯಲ್ಲಿ ನೇರವಾಗಿ ಭಾಗವಹಿಸುತ್ತಾನೆ.

2.     ನೈತಿಕ ಸಮಸ್ಯೆಗಳಿಗೆ ಸಾಂಪ್ರದಾಯಿಕವಲ್ಲದ ಹೊಸ ಮತ್ತು ಮಾನವೀಯ ಪರಿಹಾರಗಳನ್ನು ಯೋಚಿಸುವ ಸಾಮರ್ಥ್ಯ ಬೆಳೆಯುತ್ತದೆ.

3.     ಶಿಕ್ಷಕರು ಮೌಲ್ಯಗಳನ್ನು ಹೇರುವ ಬದಲು, ವಿದ್ಯಾರ್ಥಿಗಳೇ ತಾರ್ಕಿಕವಾಗಿ ಸರಿ-ತಪ್ಪುಗಳನ್ನು ನಿರ್ಧರಿಸಲು ಕಲಿಯುತ್ತಾರೆ.

4.     ಸಹಪಾಠಿಗಳ ವಿಭಿನ್ನ ದೃಷ್ಠಿಕೋನಗಳನ್ನು ಆಲಿಸಿ ಗೌರವಿಸುವ ಗುಣ ತಾನಾಗಿಯೇ ರೂಪುಗೊಳ್ಳುತ್ತದೆ.

5.     ತರಗತಿಯಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಧೈರ್ಯ ಬರುತ್ತದೆ.

ಇತಿಮಿತಿಗಳು

1.     ಸೀಮಿತ ಅವಧಿಯ ತರಗತಿಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಆಲಿಸಿ, ಚರ್ಚಿಸಿ ನಿರ್ಧಾರಕ್ಕೆ ಬರುವುದು ಕಷ್ಟವಾಗಬಹುದು.

2.     ಮಾತುಗಾರ ವಿದ್ಯಾರ್ಥಿಗಳು ಚರ್ಚೆಯನ್ನು ನಿಯಂತ್ರಿಸಿ, ನಾಚಿಕೆ ಸ್ವಭಾವದ ಅಥವಾ ಹಿಂಜರಿಯುವ ವಿದ್ಯಾರ್ಥಿಗಳು ಮೂಲೆಗುಂಪಾಗುವ ಸಾಧ್ಯತೆ ಇರುತ್ತದೆ.

3.     ಸರಿಯಾದ ಮಾರ್ಗದರ್ಶನವಿಲ್ಲದಿದ್ದರೆ ಚರ್ಚೆಯು ಮೂಲ ನೈತಿಕ ವಿಷಯವನ್ನು ಬಿಟ್ಟು ಅಪ್ರಸ್ತುತ ವಿಚಾರಗಳತ್ತ ತಿರುಗಬಹುದು.

4.     ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದಾಗ ಶಿಸ್ತು ಕಾಪಾಡುವುದು ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವುದು ಸವಾಲಾಗುತ್ತದೆ.

5.     ನೈತಿಕ ವಿಷಯಗಳಲ್ಲಿ ಎಲ್ಲರೂ ಒಪ್ಪುವ ಏಕರೂಪದ ಪರಿಹಾರ ಸಿಗದೆ ಗೊಂದಲ ಉಳಿಯುವ ಸಾಧ್ಯತೆಯಿರುತ್ತದೆ.

2. ಪರೋಕ್ಷ ವಿಧಾನ (Indirect Approach):

         ಮೌಲ್ಯಶಿಕ್ಷಣದ ಪರೋಕ್ಷ ವಿಧಾನ ಎಂದರೆ ಮೌಲ್ಯಗಳನ್ನು ಪ್ರತ್ಯೇಕ ಪಠ್ಯ ವಿಷಯವಾಗಿ ಬೋಧಿಸದೆ, ಶಾಲೆಯ ದೈನಂದಿನ ಚಟುವಟಿಕೆಗಳು, ನಿಯಮಿತ ಪಠ್ಯಗಳು ಹಾಗೂ ವಾತಾವರಣದ ಮೂಲಕ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಬೆಳೆಸುವುದು.

          ಶಾಲಾ ಪಠ್ಯವಿಷಯಗಳಲ್ಲಿ ಮೌಲ್ಯಶಿಕ್ಷಣಕ್ಕಾಗಿ ಸೂಕ್ತ ಅವಕಾಶ ಅಥವಾ ಸಂದರ್ಭಗಳನ್ನು ಗುರುತಿಸುವುದು ಎಂದರೆ, ಸಾಮಾನ್ಯ ಪಠ್ಯಕ್ರಮವನ್ನು ಬೋಧಿಸುವಾಗಲೇ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಜೋಡಿಸಲು (ಸಮನ್ವಯಗೊಳಿಸಲು) ಸಿಗುವ ಸೂಕ್ತ ಅವಕಾಶ ಅಥವಾ ಸಂದರ್ಭಗಳನ್ನು ಗುರುತಿಸುವುದು.

      ವಿವಿಧ ವಿಷಯಗಳಲ್ಲಿ ಸೂಕ್ತ ಅವಕಾಶಗಳನ್ನು ಗುರುತಿಸುವ ತಂತ್ರಗಳು

 

ಶಾಲಾ ವಿಷಯ

ಅವಕಾಶಗಳು

ಬಿಂಬಿತವಾಗುವ ಮೌಲ್ಯಗಳು

ಭಾಷೆಗಳು (ಕನ್ನಡ, ಆಂಗ್ಲಭಾಷೆ, ಹಿಂದಿ)

ಕಥೆಗಳು, ಕವಿತೆಗಳು, ಆತ್ಮಚರಿತ್ರೆಗಳು, ನಾಟಕಗಳು

ಕರುಣೆ, ಪ್ರಾಮಾಣಿಕತೆ, ತ್ಯಾಗ, ಸಹಾನುಭೂತಿ, ಭ್ರಾತೃತ್ವ.

ಸಮಾಜ ವಿಜ್ಞಾನ (ಇತಿಹಾಸ, ಪೌರನೀತಿ,ಭೂಗೋಳ)

ಸಂವಿಧಾನದ ಆಶಯಗಳು, ಸ್ವಾತಂತ್ರ್ಯ ಹೋರಾಟ, ಪರಿಸರ ವೈವಿಧ್ಯತೆ

ದೇಶ ಪ್ರೇಮ, ಸಮಾನತೆ, ನ್ಯಾಯ, ಸಾಂಸ್ಕೃತಿಕ ಗೌರವ, ಜವಾಬ್ದಾರಿಯುತ ಪೌರತ್ವ.

ವಿಜ್ಞಾನ (ಭೌತಶಾಸ್ತ್ರ, ರಸಾಯನ ಶಾಸ್ತ್ರ ಜೀವಶಾಸ್ತ್ರ)

ಜೀವ ಪರಿಸರ, ಆವಿಷ್ಕಾರಗಳ ಇತಿಹಾಸ, ನೈಸರ್ಗಿಕ ಸಮತೋಲನ.

ವೈಜ್ಞಾನಿಕ ಮನೋಭಾವ, ಸತ್ಯಶೋಧನೆ, ಪರಿಸರ ಪ್ರೇಮ, ಜೀವಿಗಳ ಮೇಲಿನ ದಯೆ.

ಗಣಿತ ಶಾಸ್ತ್ರ

ನಿಖರ ಲೆಕ್ಕಾಚಾರ, ಬಜೆಟ್‌ ರಚನೆ, ಜ್ಯಾಮಿತೀಯ ರಚನೆಗಳು.

ನಿಖರತೆ, ಸತ್ಯತೆ, ಶಿಸ್ತು, ಮಿತವ್ಯಯ, ತಾರ್ಕಿಕ ಚಿಂತನೆ.

 

ಶಿಕ್ಷಕರು ಅನುಸರಿಸಬಹುದಾದ ಕಾರ್ಯತಂತ್ರಗಳು:

1.     ಪಾಠವನ್ನು ಬೋಧಿಸುವ ಮುನ್ನವೇ ಆ ಘಟಕದಲ್ಲಿ ಬರುವ ಮೌಲ್ಯ ಆಧಾರಿತ ಅಂಶಗಳನ್ನು (ಉದಾ: ಪಾತ್ರಗಳ ನಡವಳಿಕೆ, ಐತಿಹಾಸಿಕ ಘಟನೆ) ಗುರುತಿಸಿ ಪಟ್ಟಿ ಮಾಡಿಕೊಳ್ಳುವುದು.

2.     ಕೇವಲ ಪಠ್ಯದ ಮಾಹಿತಿಗೆ ಸೀಮಿತವಾಗದೆ, “ಈ ಸನ್ನಿವೇಶದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದೀರಿ?” ಎಂಬಂತಹ ವಿವೇಚನಾತ್ಮಕ ಪ್ರಶ್ನೆಗಳನ್ನು ಕೇಳುವುದು.

3.     ಸಮಕಾಲೀನ ಸನ್ನಿವೇಶಕ್ಕೆ ಹೋಲಿಕೆ: ಪಠ್ಯದಲ್ಲಿನ ಸನ್ನಿವೇಶವನ್ನು ಪ್ರಸ್ತುತ ಸಮಾಜ ಅಥವಾ ದೈನಂದಿನ ಜೀವನದ ಘಟನೆಗಳಿಗೆ ಹೋಲಿಸಿ ವಿಶ್ಲೇಷಿಸುವುದು.

4.     ಯೋಜನಾ ಕಾರ್ಯಗಳು: ಮೌಲ್ಯಗಳನ್ನು ಕೇವಲ ಮಾತಿನಲ್ಲಿ ಹೇಳದೆ ಕ್ಷೇತ್ರ ಭೇಟಿ, ಸಮೀಕ್ಷೆ ಅಥವಾ ಸ್ವಚ್ಛತಾ ಕಾರ್ಯಗಳ ಮೂಲಕ ಕಾರ್ಯರೂಪಕ್ಕೆ ತರುವುದು.

3. ಪ್ರಾಸಂಗಿಕ ವಿಧಾನ (Incidental Approach):

          ಮೌಲ್ಯಶಿಕ್ಷಣದಲ್ಲಿ ಪ್ರಾಸಂಗಿಕ ವಿಧಾನ ಎಂದರೆ ಯಾವುದೇ ಪ್ರತ್ಯೇಕ ಪಠ್ಯಕ್ರಮ ಅಥವಾ ನಿಗದಿತ ಅವಧಿ ಇಲ್ಲದೆ, ದಿನನಿತ್ಯದ ನೈಜ ಸನ್ನಿವೇಶಗಳು ಹಾಗೂ ತರಗತಿಯ ಸಂದರ್ಭಗಳಿಗೆ ಅನುಗುಣವಾಗಿ ಮೌಲ್ಯಗಳನ್ನು ಕಲಿಸುವ ಪದ್ದತಿ.

ಮೌಲ್ಯಶಿಕ್ಷಣದಲ್ಲಿ ಪ್ರಾಸಂಗಿಕ ಸನ್ನಿವೇಶಗಳ ಗುರುತಿಸುವಿಕೆ ಮತ್ತು ಬಳಕೆ

       ಮೌಲ್ಯಶಿಕ್ಷಣದಲ್ಲಿ ಪ್ರಾಸಂಗಿಕ ಸನ್ನಿವೇಶಗಳ ಗುರುತಿಸುವಿಕೆ ಎಂದರೆ ಶಾಲಾ ಪರಿಸರದಲ್ಲಿ ಆಕಸ್ಮಿಕವಾಗಿ ನಡೆಯುವ ದೈನಂದಿನ ಘಟನೆಗಳನ್ನು ಶಿಕ್ಷಕರು ಸಮಯೋಚಿತವಾಗಿ ಗುರುತಿಸಿ, ಅವುಗಳ ಮೂಲಕ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಪ್ರಕ್ರಿಯೆ.

1.     ಸನ್ನಿವೇಶಗಳನ್ನು ಗುರುತಿಸುವಿಕೆ: ಶಿಕ್ಷಕರು ತರಗತಿ, ಮೈದಾನ ಅಥವಾ ಶಾಲಾ ಆವರಣದಲ್ಲಿ ನಡೆಯುವ ಕೆಳಗಿನ ಪ್ರಮುಖ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸಿ ಗುರುತಿಸುತ್ತಾರೆ;

·         ವಿದ್ಯಾರ್ಥಿಗಳ ನಡುವಿನ ವರ್ತನೆ: ಜಗಳ, ವಾದ-ವಿವಾದ, ಅಸೂಯೆ ಅಥವಾ ಪರಸ್ಪರ ಸಹಾಯ ಮಾಡುವ ಸಂದರ್ಭಗಳು.

·         ಆಕಸ್ಮಿಕ ಘಟನೆಗಳು: ವಸ್ತುಗಳು ಕಳೆದುಹೋಗುವುದು ಅಥವಾ ಸಿಗುವುದು, ಯಾರಾದರೂ ಗಾಯಗೊಳ್ಳುವುದು, ತರಗತಿಯಲ್ಲಿ ಸ್ವಚ್ಚತೆ ಕೊರತೆ.

·         ಸೋಲು-ಗೆಲುವಿನ ಕ್ಷಣಗಳು: ಆಟೋಟಗಳಲ್ಲಿ ಅಥವಾ ಪರೀಕ್ಷೆಗಳಲ್ಲಿ ಒಬ್ಬರ ಯಶಸ್ಸು ಅಥವಾ ಇನ್ನೊಬ್ಬರ ನಿರಾಶೆ.

2.    ಮೌಲ್ಯಗಳನ್ನು ಎತ್ತಹಿಡಿಯಲು ಸನ್ನಿವೇಶಗಳ ಬಳಕೆ:

 

ಸನ್ನಿವೇಶ

ಶಿಕ್ಷಕರು ಬಳಸುವ ವಿಧಾನ

ಬೆಳೆಯುವ ಮೌಲ್ಯ

ವಸ್ತು/ಹಣ ಸಿಕ್ಕಾಗ

ಯಾರಾದರೂ ಕಳೆದುಕೊಂಡ ವಸ್ತುವನ್ನು ಮರಳಿಸಿದಾಗ, ಇಡೀ ತರಗತಿಯ ಮುಂದೆ ಆ ವಿದ್ಯಾರ್ಥಿಯನ್ನು ಪ್ರಶಂಸಿಸುವುದು.

ಪ್ರಾಮಾಣಿಕತೆ

ಆಟದ ಮೈದಾನದಲ್ಲಿ ಸೋಲು

ಸೋತ ತಂಡವನ್ನು ನಿಂದಿಸದೆ, ಅವರ ಆಟದ ಶ್ರಮವನ್ನು ಗುರುತಿಸಿ ಕ್ರೀಡಾಸ್ಪೂರ್ತಿಯ ಮಹತ್ವ ತಿಳಿಸುವುದು.

ಸಹನೆ ಮತ್ತು ಕ್ರೀಡಾಸ್ಪೂರ್ತಿ

ತರಗತಿಯಲ್ಲಿ ಕಸ ಬಿದ್ದಾಗ

ಶಿಕ್ಷಕರೇ ಸ್ವತಃ ಕಸದ ಬುಟ್ಟಿಗೆ ಹಾಕಿ, ಶ್ರಮದಾನ ಹಾಗೂ ಪರಿಸರ ಪ್ರೇಮದ ಮಾದರಿಯಾಗುವುದು.

ಸ್ವಚ್ಚತೆ ಮತ್ತು ಜವಾಬ್ದಾರಿ

ಸಹಪಾಠಿ ಗಾಯಗೊಂಡಾಗ

ಪಕ್ಕದಲ್ಲಿದ್ದ ವಿದ್ಯಾರ್ಥಿ ಪ್ರಾಥಮಿಕ ಚಿಕಿತ್ಸೆಗೆ ನೆರವಾದಾಗ, ಆ ಕಾಳಜಿಯನ್ನು ಎತ್ತಿಹಿಡಿಯುವುದು.

ಸಹಾನುಭೂತಿ

ಮದ್ಯಾಹ್ನದ ಊಟ

ಎಲ್ಲರೂ ಒಟ್ಟಿಗೆ ಕುಳಿತು ಸಮಾನವಾಗಿ ಊಟ ಹಂಚಿಕೊಳ್ಳುವುದನ್ನು ಪ್ರೋತ್ಸಾಹಿಸುವುದು.

ಸಮಾನತೆ ಮತ್ತು ಸಹಬಾಳ್ವೆ

‍ಶಿಕ್ಷಕರ ಪಾತ್ರ:

1.     ಘಟನೆ ನಡೆದ ತಕ್ಷಣವೇ ಶಿಕ್ಷಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕು (ವಿಳಂಬವಾದರೆ ಪರಿಣಾಮ ಕಡಿಮೆಯಾಗುತ್ತದೆ.)

2.     ತಪ್ಪು ಮಾಡಿದವರನ್ನು ಅವಮಾನಿಸದೆ, “ನೀವು ಅವರ ಜಾಗದಲ್ಲಿದ್ದರೆ ಏನಾಗುತ್ತಿತ್ತು?” ಎಂಬಂತಹ ಪ್ರಶ್ನೆಗಳ ಮೂಲಕ ಆತ್ಮಾವಲೋಕನಕ್ಕೆ ಪ್ರೇರೇಪಿಸುವುದು.

3.     ಶಿಕ್ಷಕರು ತಮ್ಮ ಸ್ವಂತ ನಡವಳಿಕೆಯ ಮೂಲಕವೇ ಆ ಮೌಲ್ಯಗಳನ್ನು ಪ್ರದರ್ಶಿಸುವುದು.

Comments

Popular posts from this blog

ಮೌಲ್ಯಗಳ ಮಾಪನದಲ್ಲಿ ಸಾಧನ ಮತ್ತು ತಂತ್ರಗಳು