ಮೂಲಭೂತ ಮಾನವೀಯ ಮೌಲ್ಯಗಳು

 

ಮಾನವೀಯ ಮೌಲ್ಯಗಳು

ಮಾನವೀಯ ಮೌಲ್ಯಗಳು  ವ್ಯಕ್ತಿಯ ನಡವಳಿಕೆ, ಯೋಚನೆ ಮತ್ತು ಸಮಾಜದೊಂದಿಗೆ ಒಟ್ಟಾಗಿ ಬದುಕಲು ಮಾರ್ಗದರ್ಶನ ನೀಡುವ ಮೂಲ ತತ್ವಗಳಾಗಿವೆ. ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾದ 5 ಮೂಲಭೂತ ಮಾನವೀಯ ಮೌಲ್ಯಗಳು ಕೆಳಗಿನಂತಿವೆ,

1.     ಸತ್ಯ: ಮಾತು ಮತ್ತು ನಡವಳಿಕೆಯಲ್ಲಿ ಪ್ರಾಮಾಣಿಕತೆಯಿಂದ ಇರುವುದು, ಸುಳ್ಳು ಹೇಳದಿರುವುದು ಮತ್ತು ಸದಾ ವಾಸ್ತವಕ್ಕೆ ನಿಷ್ಠರಾಗಿರುವುದು.

2.     ಧರ್ಮ/ಸದ್ವರ್ತನೆ: ಸಮಾಜಕ್ಕೆ ಹಿತಕರವಾದ, ನಿಯಮಬದ್ಧವಾದ ಮತ್ತು ನೈತಿಕವಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವುದು.

3.     ಶಾಂತಿ: ಮನಸ್ಸಿನಲ್ಲಿ ಶಾಂತತೆ, ತಾಳ್ಮೆ ಮತ್ತು ಕೋಪ ಅಥವಾ ದ್ವೇಷವಿಲ್ಲದ ಜೀವನ ನಡೆಸುವುದು.

4.     ಪ್ರೇಮ: ಎಲ್ಲ ಜೀವಿಗಳ ಬಗ್ಗೆ ನಿಸ್ವಾರ್ಥ ಕಾಳಜಿ, ಪ್ರೀತಿ ಮತ್ತು ಸದ್ಬಾವನೆ ಹೊಂದಿರುವುದು.

5.     ಅಹಿಂಸೆ: ಕಾಯಕ, ಮಾತು ಅಥವಾ ಯೋಚನೆಗಳ ಮೂಲಕ ಯಾವುದೇ ಜೀವಿಗೆ ತೊಂದರೆ ಕೊಡದಿರುವುದು.

    ದೈನಂದಿನ ಜೀವನಕ್ಕೆ ಅಗತ್ಯವಾದ ಇತರ ಮೌಲ್ಯಗಳೆಂದರೆ,

           ದಯೆ ಮತ್ತು ಕರುಣೆ, ಗೌರವ, ಪ್ರಾಮಾಣಿಕತೆ, ಸಹಕಾರ, ಸಮಾನತೆ, ಕೃತಜ್ಞತೆ ಇತ್ಯಾದಿ..

ಸಮಕಾಲಿನ ಮೌಲ್ಯಗಳು (Contemporary Values)

         ಸಮಕಾಲಿನ  ಮೌಲ್ಯಗಳೆಂದರೆ ಇಂದಿನ ಆಧುನಿಕ ಸಮಾಜ, ಕಾಲಘಟ್ಟ ಮತ್ತು ಜೀವನ ಶೈಲಿಗೆ ತಕ್ಕಂತೆ ರೂಪಿತವಾದ ಆದರ್ಶಗಳು ಹಾಗೂ ಜೀವನ ತತ್ವಗಳು

ವೈಜ್ಞಾನಿಕ ಮನೋಭಾವ

·         ವೈಜ್ಞಾನಿಕ ಮತ್ತು ವೈಚಾರಿಕ ದೃಷ್ಠಿಕೋನ: ಮೂಢನಂಬಿಕೆಗಳನ್ನು ಬದಿಗೊತ್ತಿ, ತರ್ಕ, ವೈಚಾರಿಕತೆ ಮತ್ತು ಸತ್ಯಾಸತ್ಯತೆಯ ಅಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು.

·         ಪ್ರಶ್ನಿಸುವ ಮನೋಭಾವ: ಯಾವುದೇ ವಿಚಾರವನ್ನು ಯಾರೋ ಹೇಳಿದರು ಎಂಬ ಕಾರಣಕ್ಕೆ ಒಪ್ಪಿಕೊಳ್ಳದೆ “ಏಕೆ”? “ಹೇಗೆ”? “ಇದಕ್ಕೆ ಆಧಾರವೇನು”? ಎಂದು ಪ್ರಶ್ನಿಸುವುದು.

·         ಪುರಾವೆ ಆಧಾರಿತ ತೀರ್ಮಾನ: ಕೇವಲ ಊಹೆ ಅಥವಾ ನಂಬಿಕೆಯ ಬದಲು, ಪ್ರಯೋಗ ಮತ್ತು ಸ್ಪಷ್ಟ ಪುರಾವೆಗಳನ್ನು ನೋಡಿ ತೀರ್ಮಾನಕ್ಕೆ ಬರುವುದು.

·         ತಪ್ಪನ್ನು ಒಪ್ಪಿಕೊಳ್ಳುವ ಮುಕ್ತತೆ: ಹೊಸ ಪುರಾವೆ ಅಥವಾ ಸತ್ಯ ದೊರೆತಾಗ, ತನ್ನ ಹಳೆಯ ತಪ್ಪು ನಂಬಿಕೆಗಳನ್ನು ಬದಲಾಯಿಸಿಕೊಳ್ಳಲು ಸಿದ್ದವಿರುವುದು.

·         ವಿಮರ್ಶಾತ್ಮಕ ಚಿಂತನೆ: ಪ್ರತಿಯೊಂದು ವಿಷಯವನ್ನು ವಿವೇಚನೆಯ ಒರೆಗಲ್ಲಿಗೆ ಹಚ್ಚಿ ಸರಿ-ತಪ್ಪುಗಳನ್ನು ತೂಗಿ ನೋಡುವುದು.

ಬೌದ್ಧಿಕ ಮೌಲ್ಯಗಳು

        ಬೌದ್ಧಿಕ ಮೌಲ್ಯಗಳು ವ್ಯಕ್ತಿಯ ಆಲೋಚನಾ ಸಾಮರ್ಥ್ಯ, ಜ್ಞಾನಾರ್ಜನೆ, ತಾರ್ಕಿಕ ಚಿಂತನೆ ಮತ್ತು ಸತ್ಯಶೋಧನೆಗೆ ಸಂಬಂಧಿಸಿದ ಆದರ್ಶ ತತ್ವಗಳಾಗಿವೆ. ಬೌದ್ಧಿಕ ಮೌಲ್ಯಗಳೆಂದರೆ,

·         ಸತ್ಯಶೋಧನೆ: ಯಾವುದೇ ವಿಚಾರವನ್ನು ಕಣ್ಣುಮುಚ್ಚಿ ನಂಬದೆ, ಸತ್ಯ ಮತ್ತು ವಾಸ್ತವವನ್ನು ತಿಳಿದುಕೊಳ್ಳುವ ನಿರಂತರ ಹಂಬಲ.

·         ತಾರ್ಕಿಕತೆ ಮತ್ತು ವಿವೇಚನೆ: ಭಾವನೆ ಅಥವಾ ಪೂರ್ವಾಗ್ರಹಗಳಿಗೆ ಒಳಗಾಗದೆ, ತರ್ಕ ಮತ್ತು ಪುರಾವೆಗಳ ಅಧಾರದ ಮೇಲೆ ವಿಷಯಗಳ ಆಧಾರದ ಮೇಲೆ ವಿಷಯಗಳನ್ನು ವಿಶ್ಲೇಷಿಸುವುದು.

·         ಮುಕ್ತ ಮನೋಭಾವ: ಹೊಸ ಆಲೋಚನೆಗಳು, ವಿಭಿನ್ನ ದೃಷ್ಠಿಕೋನಗಳು ಮತ್ತು ಇತರರ ರಚನಾತ್ಮಕ ಅಭಿಪ್ರಾಯಗಳನ್ನು ಮುಕ್ತವಾಗಿ ಸ್ವೀಕರಿಸುವುದು.

·         ಬೌದ್ಧಿಕ ಪ್ರಾಮಾಣಿಕತೆ: ಜ್ಞಾನ, ಸಂಶೋಧನೆ ಅಥವಾ ಅಭಿಪ್ರಾಯಗಳಲ್ಲಿ ಪಕ್ಷಪಾತವಿಲ್ಲದೆ ಸತ್ಯಕ್ಕೆ ನಿಷ್ಠವಾಗಿರುವುದು ಮತ್ತು ಸ್ವಂತ ತಪ್ಪುಗಳನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ.

·         ಕುತೂಹಲ ಮತ್ತು ಜ್ಞಾನದಾಹ: ನಿರಂತರವಾಗಿ ಕಲಿಯುವ, ಪ್ರಶ್ನಿಸುವ ಮತ್ತು ಹೊಸ ವಿಷಯಗಳನ್ನು ಅನ್ವೇ಼ಷಿಸುವ ಆಸಕ್ತಿ.

·         ಸ್ವತಂತ್ರ ಆಲೋಚನೆ: ಸಮಾಜದ ರೂಢಿಗತ ಕಟ್ಟುಪಾಡುಗಳಿಗೆ ಕುರುಡಾಗಿ ಬಲಿಯಾಗದೆ, ಸ್ವಂತ ಬುದ್ದಿಶಕ್ತಿಯಿಂದ ಸರಿಯಾದುದನ್ನು ನಿರ್ಧರಿಸುವುದು.

ಪ್ರಾಮಾಣಿಕತೆ

     ಸಮಕಾಲೀನ ಸಮಾಜದಲ್ಲಿ ಪ್ರಾಮಾಣಿಕತೆಯು ಕೇವಲ ಒಂದು ಸಾಂಪ್ರದಾಯಿಕ ನೈತಿಕ ಕರ್ತವ್ಯವಾಗಿರದೆ ಅತ್ಯಂತ ಮಹತ್ವದ ಸಾಮಾಜಿಕ ಹಾಗೂ ವ್ಯಾವಹಾರಿಕ ಮೌಲ್ಯವಾಗಿ ರೂಪಾಣತರಗೊಂಡಿದೆ.

ಇದರ ಪ್ರಮುಖ ಆಯಾಮಗಳೆಂದರೆ,

·         ಪಾರದರ್ಶಕತೆ ಮತ್ತು ನೈಜತೆ: ಸಾಮಾಜಿಕ ಜಾಲತಾಣಗಳ ಕೃತಕ ಪ್ರಪಂಚ ಮತ್ತು ತಪ್ಪು ಮಾಹಿತಿಗಳ ನಡುವೆ, ಜನರು ಕೇವಲ ಹೊಳಪಿನ ಪ್ರದರ್ಶನಕ್ಕಿಂತ ವಾಸ್ತವವಾದ ಸತ್ಯಕ್ಕೆ ಹೆಚ್ಚು ಬೆಲೆ ನೀಡುತ್ತಿದ್ದಾರೆ. ವೈಯಕ್ತಿಕ ಬದುಕು ಅಥವಾ ಉದ್ಯಮಗಳಲ್ಲಿ ಮುಚ್ಚುಮರೆಯಿಲ್ಲದ ಪಾರದರ್ಶಕತೆ ಇಂದು ವಿಶ್ವಾಸಾರ್ಹತೆಯ ಮೂಲ ಆಧಾರವಾಗಿದೆ.

·         ಆಧುನಿಕ ಕಾರ್ಯಕ್ಷೇತ್ರದಲ್ಲಿ ಸ್ಪಷ್ಟ ಸಂವಹನ:  ಕಛೇರಿ ಅಥವಾ ವೃತ್ತಿಪರ ವಾತಾವರಣದಲ್ಲಿ ಕೇವಲ ಸಮ್ಮತಿ ಸೂಚಿಸುವುದಕ್ಕಿಂತ, ಸತ್ಯವನ್ನು ಧೈರ್ಯವಾಗಿ ಹೇಳುವುದನ್ನು ಪ್ರೋತ್ಸಾಹಿಸಲಾಗುತ್ತಿದೆ. ತಪ್ಪುಗಳು ಅಥವಾ ವೈಫಲ್ಯಗಳನ್ನು ಮುಚ್ಚಿಡದೆ ನೇರವಾಗಿ ಒಪ್ಪಿಕೊಳ್ಳುವುದು ಮತ್ತು ಮುಕ್ತವಾಗಿ ಚರ್ಚಿಸುವುದು ಸಂಸ್ಥೆಯ ಬೆಳವಣಿಗೆಗೆ ಅಗತ್ಯವೆಂದು ಪರಿಗಣಿಸಲಾಗಿದೆ.

·         ಸಾಂಸ್ಥಿಕ ವಿಶ್ವಾಸಾರ್ಹತೆ: ರಾಜಕೀಯ, ಮಾಧ್ಯಮ ಹಾಗೂ ಬೃಹತ್‌ ಕಾರ್ಪೋರೇಟ್‌ ಸಂಸ್ಥೆಗಳ ಮೇಲಿನ ನಂಬಿಕೆ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ, ನೈತಿಕ ಪ್ರಾಮಾಣಿಕತೆಯೇ ಪ್ರಮುಖ ಶಕ್ತಿಯಾಗಿದೆ. ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಂಡು, ಸರಿಯಾದ ಮಾಹಿತಿಯನ್ನು ಜನರಿಗೆ ತಲುಪಿಸುವ ಸಂಸ್ಥೆಗಳು ಸಮಾಜದಲ್ಲಿ ದೀರ್ಘಕಾಲಿಕ ಮನ್ನಣೆ ಪಡೆಯುತ್ತೆವೆ.

·         ಸಂಬಂಧಗಳಲ್ಲಿ ಭಾವನಾತ್ಮಕ ಸತ್ಯತೆ: ವೈಯಕ್ತಿಕ ಸಂಬಂಧಗಳಲ್ಲಿ ಪ್ರಾಮಾಣಿಕತೆ ಎಂದರೆ ಕೇವಲ ಕಠಿಣವಾಗಿ ಮಾತನಾಡುವುದಲ್ಲ; ಬದಲಿಗೆ ಪರಸ್ಪರ ಗೌರವ ಹಾಗೂ ಸಹಾನುಭೂತಿಯೊಂದಿಗೆ ತಮ್ಮ ಭಾವನೆಗಳು, ಮಿತಿಗಳು ಮತ್ತು ಅಗತ್ಯಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳುವುದು. ಇದು ಸುಳ್ಳಿನ ಮುಖವಾಡಗಳಿಲ್ಲದ ಗಟ್ಟಿಯಾದ ಬಾಂಧವ್ಯಕ್ಕೆ ದಾರಿ ಮಾಡಿಕೊಡುತ್ತದೆ.

ಸಮಾಜ ಸೇವೆ

      ಆಧುನಿಕ ಕಾಲದಲ್ಲಿ ಸಮಾಜ ಸೇವೆಯು ಕೇವಲ ದಾನವಲ್ಲ; ಸಮಾನತೆ, ಮಾನವೀಯತೆ ಮತ್ತು ನಾಗರೀಕ ಜವಾಬ್ದಾರಿ ಸಂಕೇತ.

·         ಮಹತ್ವ: ಬಡತನ, ಅಸಮಾನತೆ ಹಾಗೂ ಪರಿಸರ ಸಮಸ್ಯೆಗಳಿಗೂ ಸ್ಪಂದಿಸಿ ಸಮಾಜದ ಶಾಂತಿ ಮತ್ತು ಸುಸ್ಥಿರ ಬೆಳವಣಿಗೆಗೆ ನೆರವಾಗುವುದು.

·         ಆಧುನಿಕ ರೂಪಗಳು: ರಕ್ತದಾನ, ಪರಿಸರ ಜಾಗೃತಿ, ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ಮತ್ತು ಆನ್ ಲೈನ್‌ ಮೂಲಕ ಸಮಾಜಿಕ ಕಾಳಜಿ ಬೆಳೆಸುವುದು.

·         ಗುರಿ: ವ್ಯಕ್ತಿ ವಿಕಸನದ ಜೊತೆಗೆ ಆರೋಗ್ಯಕರ, ನ್ಯಾಯಯುತ ಮತ್ತು ಸಹಾನುಭೂತಿಯ ಸಮಾಜವನ್ನು ಕಟ್ಟುವುದು.

ಪರಿಸರ ಸಂರಕ್ಷಣೆ

      ಇಂದಿನ ಆಧುನಿಕ ಮತ್ತು ಜಾಗತಿಕ ಯುಗದಲ್ಲಿ ಪರಿಸರ ಸಂರಕ್ಷಣೆಯು ಕೇವಲ ಒಂದು ವೈಜ್ಞಾನಿಕ ಅಥವಾ ಆಡಳಿತಾತ್ಮಕ ವಿಷಯವಾಗಿ ಉಳಿದಿಲ್ಲ; ಅದು ಸಮಾಜದ ಅತ್ಯಂತ ಪ್ರಮುಖವಾದ ಸಮಕಾಲಿನ ಮಾನವೀಯ ಮೌಲ್ಯ ಮತ್ತು ನೈತಿಕ ಮೌಲ್ಯವಾಗಿ ಹೊರಹೊಮ್ಮಿದೆ.

ಇದರ ಮುಖ್ಯ ಆಯಾಮಗಳು,

·         ನೈತಿಕ ಜವಾಬ್ದಾರಿ: ಪ್ರಕೃತಿಯನ್ನು ಕೇವಲ ಮಾನವನ ಭೋಗದ ವಸ್ತುವಾಗಿ ನೋಡದೆ, ಜೀವ ವೈವಿಧ್ಯ, ಪ್ರಾಣಿ-ಪಕ್ಷಿಗಳು ಹಾಗೂ ವೃಕ್ಷ ಸಂಪತ್ತನ್ನು ಗೌರವಿಸುವುದು ಮತ್ತು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರೀಕನ ನೈತಿಕ ಕರ್ತವ್ಯವಾಗಿದೆ.

·         ಸುಸ್ಥಿರ ಅಭಿವೃದ್ದಿ: ಆಧುನಿಕ ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿಯು ಪ್ರಕೃತಿಯ ನಾಶದ ಮೇಲೆ ನಿಲ್ಲಬಾರದು. ಇಂದಿನ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಲೇ ಮುಂದಿನ ಪೀಳಿಗೆಗೂ ನೈಸರ್ಗಿಕ ಸಂಪನ್ನೂಲಗಳನ್ನು ಉಳಿಸುವುದು ಸಮಕಾಲಿನ ಜಗತ್ತಿನ ಮೂಲ ಮೌಲ್ಯವಾಗಿದೆ.

·         ಪರಿಸರ ನ್ಯಾಯ: ವಾಯುಮಾಲಿನ್ಯ, ಜಲಮಾಲಿನ್ಯ ಮತ್ತು ಹಮಾಮಾನ ಬದಲಾವಣೆಯ ದುಷ್ಪರಿಣಾಮಗಳು ಹೆಚ್ಚಾಗಿ ಬಡ ಹಾಗೂ ದುರ್ಬಲ ವರ್ಗಗಳ ಮೇಲೆ ಬೀಳುತ್ತವೆ. ಶುದ್ಧ ಗಾಳಿ, ನೀರು ಮತ್ತು ಆರೋಗ್ಯಕರ ಪರಿಸರ ಎಲ್ಲರ ಸಮಾನತೆಯ ಮೌಲ್ಯವನ್ನು ಇದು ಪ್ರತಿಪಾದಿಸುತ್ತದೆ.

·         ಜಾಗತಿಕ ಸಾಮುದಾಯಿಕ ಪ್ರಜ್ಞೆ: ಪರಿಸರ ಸಮಸ್ಯೆಗಳು ಯಾವುದೇ ದೇಶ ಅಥವಾ ಗಡಿಯ ವ್ಯಾಪ್ತಿಗೆ ಸೀಮಿತವಾಗಿಲ್ಲ. ಜಾಗತಿಕ ತಾಪಮಾನ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಇಡೀ ವಿಶ್ವವೇ ಒಗ್ಗೂಡಿ ಕೆಲಸ ಮಾಡಬೇಕೆಂಬ ಜಾಗತಿಕ ಹೊಣೆಗಾರಿಕೆಯನ್ನು ಇದು ಬೆಳೆಸುತ್ತದೆ.

·         ವೈಯಕ್ತಿಕ ಜೀವನ ಶೈಲಿಯ ರೂಪಾಂತರ: ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವುದು, ನವೀಕರಿಸಬಹುದಾದ ಇಂಧನ ಬಳಕೆ, ತ್ಯಾಜ್ಯ ಮರುಬಳಕೆ ಹಾಗೂ ಗಿಡ-ಮರಗಳನ್ನು ಬೆಳೆಸುವಂತಹ ಪರಿಸರ ಸ್ನೇಹಿ ರೂಢಿಗಳನ್ನು ದೈನಂದಿನ ಜೀವನ ಮೌಲ್ಯವನ್ನಾಗಿ ಅಳವಡಿಸಿಕೊಳ್ಳುವುದು.

ರಾಷ್ಟ್ರೀಯ ಭಾವೈಕ್ಯತೆ

       ರಾಷ್ಟ್ರೀಯ ಭಾವೈಕ್ಯತೆ ಎಂದರೆ ದೇಶದ ಪ್ರತಿಯೊಬ್ಬ ನಾಗರೀಕನೂ ಜಾತಿ, ಮತ, ಭಾಷೆ,ಪ್ರಾಂತ ಮತ್ತು ಸಂಸ್ಕೃತಿಯ ಬೇದವಿಲ್ಲದೆ, ತಾವೆಲ್ಲರೂ ಒಂದೇ ರಾಷ್ಟ್ರದ ಅವಿಭಾಜ್ಯ ಅಂಗವೆಂಬ ಏಕತೆಯ ಭಾವನೆಯನ್ನು ಹೊಂದುವುದು. ಇಂದಿನ ಅಧುನಿಕ ಮತ್ತು ಜಾಗತಿಕ ಸನ್ನಿವೇಶದಲ್ಲಿ ಇದು ಅತ್ಯಂತ ಪ್ರಮುಖವಾದ ನಾಗರೀಕ ಮೌಲ್ಯವಾಗಿದೆ. ಇದರ ಪ್ರಾಮುಖ್ಯತೆಗಳೆಂದರೆ,

·         ವೈವಿಧ್ಯತೆಯಲ್ಲಿ ಏಕತೆ: ಭಾರತದ ಶಕ್ತಿ ಇರುವುದು ಅದರ ಬಹುತ್ವದಲ್ಲಿ. ವಿವಿಧ ಭಾಷೆ, ಧರ್ಮ, ಸಂಪ್ರದಾಯಗಳನ್ನು ಗೌರವಿಸುತ್ತಲೇ ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಅದ್ಯತೆ ನೀಡುವುದು ಇಂದಿನ ತುರ್ತು ಅಗತ್ಯ.

·         ಆಂತರಿಕ ಶಾಂತಿ ಮತ್ತು ಭದ್ರತೆ: ಕೋಮುವಾದ, ಪ್ರಾದೇಶಿಕ ಅಸಮಾನತೆ, ಭಾಷಾ ಸಂಘರ್ಷ ಮತ್ತು ಸಾಮಾಜಿಕ ತಾರತಮ್ಯಗಳನ್ನು ತಡೆಗಟ್ಟಿ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡಲು ಭಾವೈಕ್ಯತೆ ಮೂಲಾಧಾರ.

·         ಆರ್ಥಿಕ ಮತ್ತು ಸಮಾಜಿಕ ಪ್ರಗತಿ: ದೇಶದಲ್ಲಿ ಶಾಂತಿ ಮತ್ತು ಒಗ್ಗಟ್ಟು ನೆಲೆಸಿದಾಗ ಮಾತ್ರ ಉದ್ಯೋಗ, ಕೈಗಾರಿಕೆ, ತಂತ್ರಜ್ಞಾನ ಮತ್ತು ಸಾಮಾಜಿಕ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿ ಸಾಧ್ಯ.

·         ಸಂವಿಧಾನಿಕ ಮೌಲ್ಯಗಳ ಸಮರಕ್ಷಣೆ: ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಜಾತ್ಯಾತೀತತೆಯಂತಹ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬ ನಾಗರೀಕನ ನಿತ್ಯ ಜೀವನದ ಮೌಲ್ಯವನ್ನಾಗಿ ಅಳವಡಿಸಿಕೊಳ್ಳಲು ಇದು ಪ್ರೇರೇಪಿಸುತ್ತದೆ.

·         ಜಾಗತಿಕ ವೇದಿಕೆಯಲ್ಲಿ ಪ್ರಬಲ ಸ್ಥಾನ: ಆಂತರೀಕವಾಗಿ ಒಗ್ಗಟ್ಟಾಗಿರುವ ರಾಷ್ಟ್ರವು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಟ ಹಾಗೂ ಪ್ರಭಾವಿ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ.

ಜಾತ್ಯಾತೀತತೆ

       ಜಾತ್ಯಾತೀತತೆ ಎಂಬುದು ಆಧುನಿಕ ಪ್ರಜಾಪ್ರಭುತ್ವ ಸಮಾಜದ ಅತ್ಯಂತ ಪ್ರಮುಖ ಮೌಲ್ಯಗಳಲ್ಲಿ ಒಂದಾಗಿದೆ. ಇಂದಿನ ವೈವಿಧ್ಯಮಯ ಜಗತ್ತಿನಲ್ಲಿ ಇದು ಕೇವಲ ಒಂದು ರಾಜಕೀಯ ಸಿದ್ಧಾಂತವಾಗಿ ಉಳಿಯದೆ, ಶಾಂತಿಯುತ ಸಹಬಾಳ್ವೆಗೆ ಅನಿವಾರ್ಯವಾದ ಸಾಮಾಜಿಕ ಮೌಲ್ಯವಾಗಿ ಬೆಳೆದಿದೆ.

·         ಸರ್ವಧರ್ಮ ಸಮಭಾವ: ರಾಜ್ಯ ಅಥವಾ ಸರ್ಕಾರಕ್ಕೆ ಯಾವುದೇ ಅಧಿಕೃತ ಧರ್ಮವಿರುವುದಿಲ್ಲ. ಸರ್ಕಾರವು ಎಲ್ಲಾ ಧರ್ಮಗಳನ್ನು ಸಮಾನ ಗೌರವದಿಂದ ಕಾಣುತ್ತದೆ ಹಾಗೂ ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ವಿಶೇಷ ಮನ್ನಣೆ ನೀಡುವುದಿಲ್ಲ.

·         ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯ: ಪ್ರತಿಯೊಬ್ಬ ನಾಗರೀಕನಿಗೂ ತನ್ನ ಇಷ್ಟದ ಧರ್ಮವನ್ನು ಅಚರಿಸುವ, ಪಾಲಿಸುವ, ಪ್ರಚಾರ ಮಾಡುವ ಅಥವಾ ಯಾವುದೇ ಧರ್ಮವನ್ನು ನಂಬದೇ ಇರುವ ಸಂಪೂರ್ಣ ಹಕ್ಕಿರುತ್ತದೆ.

·         ತಾರತಮ್ಯ ನಿಷೇಧ: ಶಿಕ್ಷಣ, ಉದ್ಯೋಗ, ಕಾನೂನು ಮತ್ತು ನಾಗರಿಕ ಹಕ್ಕುಗಳ ವಿಚಾರದಲ್ಲಿ ಧರ್ಮದ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ಮಾಡುವುದನ್ನು ಜಾತ್ಯಾತೀತತೆ ವಿರೋಧಿಸುತ್ತದೆ.

·         ಸಾಮಾಜಿಕ ಏಕತೆ ಮತ್ತು ಶಾಂತಿ: ಭಾರತದಂತಹ ಬಹುಧರ್ಮೀಯ, ಬಹುಸಾಂಸ್ಕೃತಿಕ ಸಮಾಜದಲ್ಲಿ ಸೌಹಾರ್ದತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಳ್ಳಲು ಜಾತ್ಯಾತೀತ ಮೌಲ್ಯ ಅತ್ಯಗತ್ಯ.

·         ವೈಜ್ಞಾನಿಕ ಮನೋಭಾವದ ಉತ್ತೇಜನ: ಧಾರ್ಮಿಕ ಮೌಢ್ಯತೆಗಳ ಬದಲಿಗೆ ತರ್ಕ, ಶಿಕ್ಷಣ ಮತ್ತು ವೈಜ್ಞಾನಿಕ ಆಲೋಚನೆಗಳಿಗೆ ಒತ್ತುಕೊಡುವುದು ಆಧುನಿಕ ಜಾತ್ಯಾತೀತತೆಯ ಪ್ರಮುಖ ಆಶಯವಾಗಿದೆ.

 

Comments

Popular posts from this blog

ಮೌಲ್ಯಗಳ ಮಾಪನದಲ್ಲಿ ಸಾಧನ ಮತ್ತು ತಂತ್ರಗಳು

ಮೌಲ್ಯಶಿಕ್ಷಣದ ವಿಧಾನಗಳು ಮತ್ತು ಮೌಲ್ಯಮಾಪನ